ಮೌನ ನೃತ್ಯ
ಬಿಸಿ ಗಾಳಿಯಲ್ಲಿ, ಹೊಗೆ ಮತ್ತು ಬೆವಿರಿನ ವಾಸನೆ ತುಂಬಿದೆ. ಈ.ಡಿ.ಎಂ ವಾದನಕ್ಕೆ ಜನರು ಕುಣಿದು ಕುಪ್ಪಳಿಸುತ್ತಿದ್ದಾರೆ. ಆದರೆ ಕೊಠಡಿಯ ಗೋಡೆಯ ಅಂಚಿನಲ್ಲಿ ಹೆಚ್ಚು ಜನರಿಲ್ಲ. ಆದ ಕಾರಣ ನಾನು ಆ ಕಡೆ ಸಾಗುತ್ತೇನೆ. ಆದರೂ ಯಾರೂ ಹತ್ತಿರದಲ್ಲಿ ಇಲ್ಲವೇ ಎಂದು ಒಮ್ಮೊಮ್ಮೆ ಖಚಿತ ಪಡಿಸಿಕೊಳ್ಳುತ್ತೇನೆ. ವೇದಿಕೆಯ ಮೇಲಿಂದ ನಿಯಾನ್‌ಬೆಳಕು ಕೊಠಡಿಯಲ್ಲೆಲ್ಲಾ ಹರಿದಾಡುತ್ತದೆ. ಆಗಾಗ್ಗೆ ಕಣ್ಣು ಚುಚ್ಚುತ್ತದೆ. ಕಣ್ಣು ಕತ್ತಲಾಗುತ್ತದೆ. ಆಗ ಕ್ಷಣಕಾಲ ಕಣ್ಣು ಮುಚ್ಚಿ ನಿಂತು, ನಂತರ ಮುಂದೆ ಸಾಗುತ್ತೇನೆ. ಕೊಠಡಿಯಿಂದ ಹೊರ ಬಂದರೂ ಸಂಗೀತದ ದನಿ ಕೇಳಿ ಬರುತ್ತಿದೆ. ಬಾಗಿಲು ಮುಚ್ಚಿದ ಮೇಲೂ ಇಲೆಕ್ಟ್ರಾನಿಕ್‌ಮದ್ದಳ ೆಯ ಸದ್ದು ಕೇಳಿ ಬರುತ್ತದೆ. ಈ ಗಾನಕ್ಕೆ ತಕ್ಕಂತೆ ಕುಣಿಯುತ್ತಿರುವವರ ಹೆಜ್ಜೆ ಸಪ್ಪಳದ ಅರಿವಾಗುತ್ತಿದೆ. ನನ್ನ ಪಾದಗಳ ಮೂಲಕ ಜೀವಂತ ಮಿಡಿತ ಹರಿದಂತೆ ಭಾಸವಾಗುತ್ತಿದೆ. ಬಹಳ ಸುಸ್ತಾಗುವಂತಹ ಅನುಭವ. ನಾನು ಹಾಗೇ ಗೋಡೆಗೆ ಒರಗುತ್ತೇನೆ. ಇದು ಒಳಾಂಗಣ ಸಂಗೀತ ಉತ್ಸವ. ನಾನು ಕಲಾವಿದರ ಅಭ್ಯಾಸದ ಭವನದಲ್ಲಿದ್ದೇನೆ. ಈ.ಡಿ.ಎಂ ಸಪ್ಪಳ ಹಾಗೂ ನಿಯಾನ್‌ಬೆಳಕು, ಕಲಾತ್ಮಕ ಅಭಿವ್ಯಕ್ತಿಗೆ ಹೇಗೆ ಹೊಂದುತ್ತದೆ ಎಂದು ನನಗೆ ತಿಳಿಯದು. ಇಲ್ಲವೇ ನನ್ನದು ಸ್ವಲ್ಪ ಹೆಚ್ಚು ಆಶಯವಿರಬಹುದು. ಪ್ರತಿಯೊಂದು ಕದದ ಮೇಲೂ ಕೀಟೋಸ್.ಎಂ – ಕ್ಯೂ ಇಯಾನ್ಸ್‌ಎಂಬ ಚಿಹ್ನೆಗಳಿವೆ. ಇವು ಕಲಾವಿದರ ಹೆಸರುಗಳಿರ ಬಹುದು. ನನಗೆ ಸರಿಯಾಗಿ ತಿಳಿದಿಲ್ಲ. ಈ ಪ್ರಾಂಗಣದ ಕೊನೆಯಲ್ಲಿ “ಮೌನ ನೃತ್ಯ” ಎಂಬ ಸಂಕೇತ ಕಾಣಿಸುತ್ತದೆ. ಕಲಾವಿದರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ನಾನು ಒಂದು ಕ್ಷಣ ಹಿಂಜರಿಯುತ್ತೇನೆ. ಏನು ತೊಂದರೆ? ಗಲಾಟೆ ಗೊಂದಲಕ್ಕಿಂತಲೂ ಮೌನವೇ ಲೇಸು ಎಂದು ಆ ದಿಕ್ಕಿನಲ್ಲಿ ನೆಡೆಯುತ್ತೇನೆ.
ನಾನು ಈ ಕೊಠಡಿಯೊಳಗೆ ಬಂದಾಗ ಇಲ್ಲಿ ಕತ್ತಲು ಕವಿದಿರುತ್ತದೆ. ಒಂದು ಕ್ಷಣ ಇಲ್ಲಿ ಯಾರೂ ಇಲ್ಲ ಎಂದು ಭಾವಿಸುತ್ತೇನೆ. ಆದರೆ, ವೇಧಿಕೆಯ ಮೇಲೆ ಇರುವ ಪರದೆ ಆಡುತ್ತಿರುವುದು ಮತ್ತು ಮುಂದೆ ಬೆಳಕಿನಲ್ಲಿ ನೆರಳಿನಂತೆ ನಲಿದಾಡುತ್ತಿರುವ ಜನರ ಗುಂಪು, ಕಾಣುತ್ತದೆ. ಬಹಳ ಮಂದಿ ಇದ್ದರೂ, ಸಂಕೇತವು ಸೂಚಿಸಿದಂತೆ, ಕೊಠಡಿಯು ಪೂರ್ತಿ ನಿಶಬ್ದವಾಗಿದೆ. ಹೊರಾಂಗಣದಲ್ಲಿ ಮಾತಾಡುತ್ತಿರುವ ಜನರ ದನಿಗಳು ಮಾತ್ರ ಕೇಳಿ ಬರುತ್ತಿದೆ. ಆದರೆ ಮೆಲ್ಲಗೆ ಬಾಗಿಲು ಮುಚ್ಚಿದ ಕೂಡಲೆ ಆ ಧ್ವನಿಯೂ ಮಾಯವಾಗಿ ಮೌನ ಆವರಿಸುತ್ತದೆ. ಯಾರೋ ನನ್ನ ಬಳಿಗೆ ಬರುತ್ತಿರುವುದು ಕಾಣುತ್ತದೆ. ಇಲ್ಲಿನ ಕಾವಲುಗಾರರಿರಬೇಕು. ಏನನ್ನೋ ನನಗೆ ಕೈಗಿಡುತ್ತಿರುವುದು ಅಸ್ಪಷ್ಟವಾಗಿ ಕಾಣುತ್ತದೆ. ಅದನ್ನು ತೆಗೆದುಕೊಂಡು ಮೌನವಾಗಿಯೇ ವಂದಿಸುತ್ತೇನೆ. ಕೈಯಲ್ಲಿ ಹಿಡಿದ ವಸ್ತುವನ್ನು ಮುಟ್ಟಿ, ತಿರುಗಿಸಿ ನೋಡಿದಾಗ, ಅದು ಹೆಡ್-ಫೋನ್‌ಗಳ ಜೊಡಿ ಎಂದು ತಿಳಿಯುತ್ತದೆ. ಅವುಗಳನ್ನು ಧರಿಸುತ್ತೇನೆ. ಯಾವುದೇ ದನಿ ಕೇಳುವುದಿಲ್ಲ. ಜನರ ಗುಂಪಿನ ಕಡೆಗೆ ನೆಡೆದಾಗ, ಮೆಲು ದನಿ ನನ್ನ ಕಿವಿಗಳನ್ನು ತುಂಬುತ್ತದೆ. ಸಂಗೀತದ ನಡುವೆ ವಿಚಿತ್ರವಾದರೂ ಉತ್ಸಾಹ ಭರಿತ ಏರಿಳಿತದ ಸದ್ದು ಕೇಳಿ ಬರುತ್ತದೆ. ಈ ಮಧ್ಯೆ, ಜನರ ಗುಂಪು ಒಟ್ಟಿಗೆ ನಲಿದಾಡುತ್ತಿದ್ದಾರೆ. ಬಲಕ್ಕೆ, ಎಡಕ್ಕೆ, ಸುತ್ತ ಹೀಗೊಮ್ಮೆ, ತಿರುಗಿ ಸುತ್ತುತ್ತಾರೆ. ಮತ್ತೆ ಬಲಕ್ಕೆ, ಎಡಕ್ಕೆ, ಸುತ್ತ ಹಾಗೊಮ್ಮೆ ತಿರುಗಿ ಸುತ್ತುತ್ತಾರೆ. ಇದೇ ರೀತಿ ಮುಂದುವರೆಯುತ್ತದೆ. ವೇಧಿಕೆಯ ಮೇಲೆ ಕಲಾವಿದರಿರಬೇಕು, ಒಬ್ಬ ವ್ಯಕ್ತಿ ಮಿಕ್ಸರ್‌ತರಹದ ವಸ್ತುವಿನ ಎದುರು ನಿಂತಿದ್ದಾರೆ. ಅದು ಗಂಡಸೋ ಹೆಂಗಸೋ, ಹೇಳುವುದು ಕಷ್ಟ. ಯಾವುದೋ ಅಪರಿಚಿತ ತಾಳಕ್ಕೆ ತಲೆದೂಗುತ್ತಾ ಆಗೊಮ್ಮೆ ಈಗೊಮ್ಮೆ ಕೆಲವು ಕಂಟ್ರೋಲ್‌ಗಳನ್ನು ಮತ್ತು ಬಟನ್‌ಗಳನ್ನು ಒತ್ತುತ್ತಾರೆ. ವೇಧಿಕೆಯ ಹಿಂದೆ, ಗೋಡೆಯ ಮೇಲೆ ಪರದೆ ಇದೆ. ವಿಚಿತ್ರವಾದ ಬಣ್ಣಗಳ ಚಿಕ್ಕ ಗೋಲಾಕೃತಿಗಳು ಪರದೆಯ ಮೇಲೆಲ್ಲಾ ನಲಿಯುತ್ತಿವೆ. ಅವು ತೂಗಾಡುತ್ತಾ ತಿರುಗುವಂತೆ ಭಾಸವಾಗುತ್ತಿದೆ. ಸುಂದರವಾಗಿವೆ. ಆ ನಲಿದಾಡುವ ಚಿಕ್ಕ ಗೋಲಾಕೃತಿಗಳುಗಳನ್ನು ದಿಟ್ಟಿಸಿ ನೋಡುತ್ತೇನೆ. ಮತ್ತೆ ಪ್ರೇಕ್ಷಕರ ಕಡೆಗೆ ತಿರುಗುತ್ತೇನೆ. ಚಕಿತಗೊಳ್ಳುತ್ತೇನೆ. ಮತ್ತೊಮ್ಮೆ ಹಿಂದೆ ತಿರುಗಿ ನೋಡುತ್ತೇನೆ. ಮಗದೊಮ್ಮೆ ಕೆಳಗೆ.
ಈ ಗೋಲಗಳು, ಅಲ್ಲಿ ನೆರೆದಿರುವ ಜನ ಸಮುದಾಯ ಎಂದು ತಿಳಿಯುತ್ತದೆ. ತೂಗಾಡುತ್ತಾ ತಿರುಗುತ್ತಾ ನಲಿಯುತ್ತಿರುವ ಪ್ರತಿಯೊಂದು ಗೋಲವೂ ಇಲ್ಲಿ ನೆರೆದಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತಿದೆ. ಈ ಎಲ್ಲಾ ಗೋಲಗಳೂ ಒಟ್ಟಿಗೆ ನಲಿದಾಡಿದಾಗ, ಎಲ್ಲವೂ ಹೊಂದಾಣಿಕೆಯಾಗಿ, ಪರದೆಯ ಮೇಲೆ ಸಮರಸದ ಬೇರೆ ಬೇರೆ ಆಕಾರಗಳು ಸೃಷ್ಟಿಯಾಗುತ್ತಿವೆ. ನಾನು ಪರದೆಯನ್ನು ನೋಡುತ್ತಾ ಮೈಮರೆತು ನಿಂತ ಕಾರಣ ಹೆಡ್‌ಫೋನ್‌ನಿಶಬ್ದವಾಗಿ ಬಿಟ್ಟಿದೆ. ಹಾಗಾಗಿ ಒಮ್ಮೆ ಒದರಿಕೊಂಡು, ಮತ್ತೊಮ್ಮೆ ಸಮೂಹದೆಡೆಗೆ ನೆಡೆಯುತ್ತೇನೆ.
ಮೊದಲು ಅದೇ ಗೊಂದಲಮಯ ಶಬ್ದವು ಕೇಳುತ್ತದೆ. ನಂತರ ಎಲ್ಲರೊಂದಿಗೆ ಚಲಿಸಿದಾಗ ದನಿಯು ಬದಲಾಗುತ್ತದೆ. ತಾಳಕ್ಕೆ ತಕ್ಕಂತೆ ನಾದಗಳು ಹೊಮ್ಮುತ್ತವೆ, ಎಲ್ಲವೂ ಸೇರಿ ಇಂಪಾದ ಸಂಗೀತ ಕೇಳಿಸುತ್ತದೆ. ಸಂಗೀತ –ನೃತ್ಯ-ವಾದನದ ಸಂಗಮವಿದು. ಸ್ವರಗಳು ಮೇಳೈಸಿ ತೇಲಿ ಬರುತ್ತವೆ. ನಾನೂ ಸಹ, ಜನ ಸಮೂಹದೊಂದಿಗೆ ತೂಗಾಡುತ್ತಾ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಬಲಕ್ಕೆ, ಎಡಕ್ಕೆ, ಸುತ್ತ ಹೀಗೊಮ್ಮೆ ಹಾಗೊಮ್ಮೆ, ತಿರುಗಿ ಸುತ್ತುತ್ತಾ ನಲಿದಾಡುತ್ತೇನೆ. ಹೆಚ್ಚು ಅಥವಾ ಸ್ವಲ್ಪ ಕಡಿಮೆ ತೂಗಾಡಿದರೆ ಸಂಗೀತವು ಬದಲಾಗುತ್ತದೆ. ಕೆಲವೊಮ್ಮೆ ಕೆಲವು ಸ್ವರಗಳು ಕ್ಷಣಕಾಲ ನಿಂತು ಮುಂದೆ ಸಾಗುತ್ತವೆ. ಕೊನೆಗೂ ತಾಳಕ್ಕೆ ತಕ್ಕಂತೆ ಕುಣಿಯುವ ಅಭ್ಯಾಸವಾಗುತ್ತದೆ.
ನೃತ್ಯದ ಒಂದು ಹಂತದಲ್ಲಿ ಸಂಗೀತವು ಕ್ಷೀಣಿಸ ತೊಡಗುತ್ತದೆ, ಗುಂಪಿನ ಏಕತಾನತೆ ಹರಿದಂತೆ ಭಾಸವಾಗುತ್ತದೆ. ಪರದೆಯ ಮೇಲೆ ಗೋಲಗಳು ಬೇರೆ ಬೇರೆ ದಿಕ್ಕಿನೆಡೆ ಚದುರಿದಂತೆ ಕಾಣುತ್ತವೆ. ನಾನು ಸುತ್ತಿ, ಬಗ್ಗಿ, ತಿರುಗಿ ಹಲವು ನೃತ್ಯ ಭಂಗಿಗಳನ್ನು ಪರೀಕ್ಷಿಸುತ್ತೇನೆ. ನನ್ನ ತೋಳುಗಳನ್ನು ಅಲೆಗಳಂತೆ ತೇಲಿಸಿದಾಗ ನಾದವು ಚೆನ್ನಾಗಿ ಕೇಳಿ ಬರುತ್ತದೆ. ಹಾಗೆಯೇ ಎಲ್ಲರೂ ತಮ್ಮ ಕೈ-ಕಾಲುಗಳನ್ನು ಗಾಳಿಯಲ್ಲಿ ಎಲ್ಲೆಡೆ ಓಲಾಡಿಸುತ್ತಾ ನೃತ್ಯದ ಹಲವು ಭಂಗಿಗಳನ್ನು ಪ್ರಯೋಗಿಸುತ್ತಿದ್ದಾರೆ. ಈ.ಡಿ.ಎಂ ಪ್ರಾಂಗಣದಂತೆ ಇಲ್ಲಿಯೂ ಬಿಸಿ ಗಾಳಿ ಹರಡಿದೆ. ಆದರೆ ಇಲ್ಲಿ ಶಬ್ದ ಹೊರೆಯಾಗಿಲ್ಲ, ಕೋಲಾಹಲವಿಲ್ಲ. ಹರುಪು ಉತ್ಸಾಹ ಕೊಠಡಿಯಲ್ಲಿ ತುಂಬಿದೆ. ಹರ್ಷದಿಂದ ಮೈ ಮನಗಳು ಹಗುರವಾಗಿ ವಿನೋದದಂತೆ ಭಾಸವಾಗುತ್ತಿದೆ.
ತೆರೆಗಳಂತೆ ಹೊಮ್ಮುತ್ತಿರುವ ನಾದ ಲಹರಿಗಳು, ಗೀತೆಯ ಜೊತೆಗೆ ಜನರ ಹೆಜ್ಜೆ ಎಲ್ಲವೂ ಮೇಳೈಸಿವೆ, ತಾಳಕ್ಕೆ ತಕ್ಕಂತಹ ನೃತ್ಯ-ಮೇಳದ ಸೃಷ್ಠಿಯಾಗಿದೆ. ಇಲ್ಲಿ ತುಂತುರು ಮಳೆಯ ಸಮರಸತೆ, ಹಕ್ಕಿಗಳ ಕಲರವದಂತಹ ಇಂಪಾದ ಕಂಪನ ಕೇಳುತ್ತಿದೆ. ಪರದೆಯ ಮೇಲೆ ಗೋಲಗಳು ಬಲದಿಂದ ಎಡಕ್ಕೆ ತೊಯ್ದಾಡುತ್ತಾ ಎಲ್ಲವೂ ಒಮ್ಮಲೇ ಮುಂದಕ್ಕೆ ಬಾಗಿ ಮತ್ತೆ ಹಿಂದಕ್ಕೆ ಸರಿಯುವಂತೆ ಕಾಣ ಬರುತ್ತಿದೆ. ಮತ್ತೊಮ್ಮೆ ಮಗದೊಮ್ಮೆ ಹೀಗೆ ಮುಂದುವರಿಯುತ್ತದೆ. ಇಲ್ಲಿ ಮೌನವಿದ್ದರೂ ಲಾಲಿತ್ಯದ ಅರಿವಾಗುತ್ತಿದೆ. ನಮ್ಮ ಚಲನ ವಲನಗಳನ್ನು ಆಧರಿಸಿ ಹೆಚ್ಚೂ ಕಡಿಮೆ ಒಂದೇ ರೀತಿಯ ದನಿಗಳು ಎಲ್ಲರಿಗೂ ಕೇಳಿ ಬರುತ್ತಿದೆ ಎಂದು ಅರಿಯ ಬಹುದು. ಪ್ರತ್ಯೇಕವಾಗಿ ನಲಿಯುತ್ತಿದ್ದರೂ, ಒಮ್ಮೆಲೇ, ಸಮೂಹದ ಸಮರಸ ನೃತ್ಯವಾಗಿ ಕಾಣ ಬರುತ್ತಿದೆ.
ಸಂಗೀತವನ್ನು ಬಿಟ್ಟು ಬೇರೆ ಯಾವ ದನಿಯೂ ಕೇಳುತ್ತಿಲ್ಲ, ನನ್ನ ಸುತ್ತಲಿರುವ ಜನರ ಹೆಜ್ಜೆ ಸಪ್ಪಳವಾಗಲೀ, ನನ್ನದೇ ಉಸಿರಾಟವಾಗಲೀ ಕೇಳುತ್ತಿಲ್ಲ, ನಾನು ನಗುತ್ತಿದ್ದೇನೆ…..ಮನದಲ್ಲಯೇ ಮೌನವಾಗಿ.